12
ಯಾಜಕರು ಮತ್ತು ಲೇವಿಯರು
ಯೆಹೂದ ಪ್ರಾಂತಕ್ಕೆ ಹಿಂತಿರುಗಿದ ಯಾಜಕರ ಮತ್ತು ಲೇವಿಯರ ಪಟ್ಟಿ: ಅವರು ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೇಷೂವನೊಡನೆ ಹಿಂದಿರುಗಿದರು. ಅವರು ಯಾರೆಂದರೆ:
 
ಸೆರಾಯ, ಯೆರೆಮೀಯ, ಎಜ್ರ,
ಅಮರ್ಯ, ಮಲ್ಲೂಕ್, ಹಟ್ಟೂಷ್,
ಶೆಕನ್ಯ, ರೆಹುಮ್, ಮೆರೇಮೋತ್,
ಇದ್ದೋ, ಗಿನ್ನೆತೋನ್, ಅಬೀಯ,
ಮಿಯ್ಯಾ-ಮೀನ್, ಮಾದ್ಯ, ಬಿಲ್ಗ.
ಶೆಮಾಯ, ಯೋಯಾರೀಬ್, ಯೆದಾಯ,
ಸಲ್ಲೂ, ಅಮೋಕ್, ಹಿಲ್ಕೀಯ ಮತ್ತು ಯೆದಾಯ.
 
ಇವರೆಲ್ಲಾ ಯಾಜಕರ ನಾಯಕರು. ಇವರು ಯೇಷೂವನ ಕಾಲದಲ್ಲಿದ್ದವರು.
ಲೇವಿಯವರು ಯಾರೆಂದರೆ: ಯೇಷೂವ, ಬಿನ್ನೂಯ, ಕದ್ಮೀಯೇಲ್, ಶೆರೇಬ್ಯ, ಯೆಹೂದ ಮತ್ತು ಮತ್ತನ್ಯ. ಇವರು ಮತ್ತನ್ಯನಿಗೆ ಸಂಬಂಧಿಕರೂ ಗಾಯಕರಿಗೆ ಮುಖ್ಯಸ್ತರೂ ಆಗಿದ್ದರು. ಬಕ್ಬುಕ್ಯ ಮತ್ತು ಉನ್ನೀ ಆ ಲೇವಿಯರ ಸಂಬಂಧಿಕರಾಗಿದ್ದರು. ಕಾರ್ಯಕ್ರಮಗಳಲ್ಲಿ ಇವರು ತಮ್ಮ ಸಂಬಂಧಿಕರ ಎದುರು ನಿಲ್ಲುತ್ತಿದ್ದರು. 10 ಯೇಷೂವನು ಯೋಯಾಕೀಮನ ತಂದೆ; ಯೋಯಾಕೀಮನು ಎಲ್ಯಾಷೀಬನ ತಂದೆ; ಎಲ್ಯಾಷೀಬನು ಯೋಯಾದನ ತಂದೆ; 11 ಯೋಯಾದನು ಯೋನಾತಾನನ ತಂದೆ; ಯೋನಾತಾನನು ಯದ್ದೂವನ ತಂದೆ.
12 ಯೋಯಾಕೀಮನ ಕಾಲದಲ್ಲಿ ಇವರು ಯಾಜಕರ ಕುಟುಂಬಗಳ ನಾಯಕರಾಗಿದ್ದರು.
 
ಸೆರಾಯ ಕುಟುಂಬದ ನಾಯಕ ಮೆರಾಯ,
ಯೆರೆಮೀಯನ ಕುಟುಂಬದ ನಾಯಕ ಹನನ್ಯ.
13 ಎಜ್ರನ ಕುಟುಂಬದ ನಾಯಕ ಮೆಷುಲ್ಲಾಮ್,
ಅಮರ್ಯನ ಕುಟುಂಬದ ನಾಯಕ ಯೆಹೋಹಾನಾನ್.
14 ಮಲ್ಲೂಕ್ ಕುಟುಂಬದ ನಾಯಕ ಯೋನಾತಾನ್,
ಶೆಬನ್ಯ ಕುಟುಂಬದ ನಾಯಕ ಯೋಸೇಫ.
15 ಹಾರಿಮ್ ಕುಟುಂಬದ ನಾಯಕ ಅದ್ನ.
ಮೆರೇಮೋತ್ ಕುಟುಂಬದ ನಾಯಕ ಹಲೈ.
16 ಇದ್ದೋವಿನ ಕುಟುಂಬದ ನಾಯಕ ಜೆಕರ್ಯ,
ಗಿನ್ನೆತೋನನ ಕುಟುಂಬದ ನಾಯಕ ಮೆಷುಲ್ಲಾಮ್.
17 ಅಬೀಯ ಕುಟುಂಬದ ನಾಯಕ ಜಿಕ್ರೀ.
ಮಿನ್ಯಾಮೀನನ ಮತ್ತು ಮಾದ್ಯಾನ ಕುಟುಂಬದ ನಾಯಕ ಪಿಲ್ಲೈ.
18 ಬಿಲ್ಗಾ ಕುಟುಂಬದ ನಾಯಕ ಶಮ್ಮೂವ.
ಶೆಮಾಯನ ಕುಟುಂಬದ ನಾಯಕ ಯೆಹೋನಾತಾನ್.
19 ಯೋಯಾರೀಬ್ ಕುಟುಂಬದ ನಾಯಕ ಮತ್ತೆನೈ.
ಯೆದಾಯನ ಕುಟುಂಬದ ನಾಯಕ ಉಜ್ಜೀ.
20 ಕಲ್ಲೈಯು ಸಲ್ಲೂ ಕುಟುಂಬದ ನಾಯಕ.
ಏಬೆರನು ಆಮೋಕ್ ಕುಟುಂಬದ ನಾಯಕ.
21 ಹಷಬ್ಯನು ಹಿಲ್ಕೀಯ ಕುಟುಂಬದ ನಾಯಕ.
ನೆತನೇಲನು ಯೆದಾಯನ ಕುಟುಂಬದ ನಾಯಕ.
 
22 ಎಲ್ಯಾಷೀಬ್, ಯೋಯಾದ, ಯೋಹಾನಾನ್ ಮತ್ತು ಯದ್ದೂವ ಇವರ ಕಾಲಗಳಲ್ಲಿದ್ದ ಲೇವಿಯರ ಮತ್ತು ಯಾಜಕರ ಕುಟುಂಬನಾಯಕರ ಹೆಸರುಗಳನ್ನು ಪರ್ಶಿಯ ರಾಜನಾದ ದಾರ್ಯವೇಷನ ಆಳ್ವಿಕೆಯಲ್ಲಿ ಬರೆಯಲಾಯಿತು. 23 ಎಲ್ಯಾಷೀಬನ ಮಗನಾದ ಯೋಹಾನಾನನ ತನಕ ಲೇವಿಕುಲದ ಕುಟುಂಬನಾಯಕರ ಹೆಸರುಗಳನ್ನು ಚರಿತ್ರಾಪುಸ್ತಕದಲ್ಲಿ ದಾಖಲು ಮಾಡಿಯದೆ. 24 ಲೇವಿಯರಲ್ಲಿ ಇವರು ಮುಖಂಡರು: ಹಷಬ್ಯ, ಶೇರೇಬ್ಯ, ಕದ್ಮೀಯೇಲನ ಮಗನಾದ ಯೇಷೂವ ಮತ್ತು ಅವನ ಸಹೋದರರು. ಇವರು ತಮ್ಮ ಸಹೋದರರ ಎದುರು ನಿಂತು ಸ್ತೋತ್ರಗೀತೆ ಹಾಡುವರು. ಹೀಗೆ ಪರಸ್ಪರ ಹಾಡುವುದು ದೇವರ ಮನುಷ್ಯನಾದ ದಾವೀದನ ಆಜ್ಞೆಯಾಗಿತ್ತು.
25 ಬಾಗಿಲುಗಳ ಬಳಿಯಲ್ಲಿದ್ದ ಉಗ್ರಾಣದ ಕೋಣಿಗಳನ್ನು ಕಾಯುತ್ತಿದ್ದವರು ಯಾರೆಂದರೆ: ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್ ಮತ್ತು ಅಕ್ಕೂಬ್. 26 ಈ ದ್ವಾರಪಾಲಕರು ಯೋಯಾಕೀಮನ ಕಾಲದಲ್ಲಿ ಸೇವೆ ಮಾಡಿದರು. ಯೋಯಾಕೀಮನು ಯೇಷೂವನ ಮಗ. ಯೇಷೂವನು ಯೋಚಾದಾಕನ ಮಗ. ನೆಹೆಮೀಯನು ರಾಜ್ಯಪಾಲನಾಗಿದ್ದ ದಿನಗಳಲ್ಲಿ ಮತ್ತು ಎಜ್ರನು ಯಾಜಕನೂ ಉಪದೇಶಕನೂ ಆಗಿದ್ದ ದಿನಗಳಲ್ಲಿ ಸಹ ಈ ದ್ವಾರಪಾಲಕರು ಸೇವೆ ಸಲ್ಲಿಸಿದರು.
ಜೆರುಸಲೇಮಿನ ಪೌಳಿಗೋಡೆಯ ಪ್ರತಿಷ್ಠೆ
27 ಜನರು ಜೆರುಸಲೇಮಿನ ಪೌಳಿಗೋಡೆಯನ್ನು ಪ್ರತಿಷ್ಠಿಸಿದರು. ಅವರು ಎಲ್ಲಾ ಲೇವಿಯರನ್ನು ನಗರಕ್ಕೆ ಕರೆತಂದು ಪ್ರತಿಷ್ಠೆ ಮಾಡಿದರು. ಅವರು ದೇವರಿಗೆ ಸ್ತುತಿಪದಗಳನ್ನು, ತಾಳ, ಸ್ವರಮಂಡಲ, ಕಿನ್ನರಿಗಳನ್ನು ಬಾರಿಸುತ್ತಾ ಹಾಡಿದರು.
28-29 ಜೆರುಸಲೇಮಿನ ಸುತ್ತ ಮುತ್ತಲಿದ್ದ ಗಾಯಕರೂ ಒಟ್ಟಾಗಿ ಸೇರುತ್ತಿದ್ದರು. ಅವರು ನೆಟೋಫ, ಬೇತ್ಹ, ಗಿಲ್ಗಾಲ್, ಗೆಬ ಮತ್ತು ಅಜ್ಮಾವೇತ್ ಎಂಬ ಪಟ್ಟಣಗಳಿಂದ ಬಂದವರಾಗಿದ್ದರು. ಜೆರುಸಲೇಮಿನ ಸುತ್ತಲೂ ಗಾಯಕರು ಸಣ್ಣಸಣ್ಣ ಗ್ರಾಮಗಳನ್ನು ಕಟ್ಟಿಕೊಂಡು ವಾಸವಾಗಿದ್ದರು.
30 ಆದ್ದರಿಂದ ಯಾಜಕರೂ ಲೇವಿಯರೂ ಶಾಸ್ತ್ರೋಕ್ತವಾಗಿ ತಮ್ಮನ್ನು ಶುದ್ಧಪಡಿಸಿಕೊಂಡರು. ಅನಂತರ ಜನರನ್ನೂ ಜೆರುಸಲೇಮಿನ ಗೋಡೆಯನ್ನೂ ಬಾಗಿಲುಗಳನ್ನೂ ಶಾಸ್ತ್ರೋಕ್ತವಾಗಿ ಶುದ್ಧಿಮಾಡಿದರು.
31 ನಾನು ಯೆಹೂದದ ನಾಯಕರಿಗೆ ಗೋಡೆಯ ಮೇಲೆ ನಿಂತುಕೊಳ್ಳಲು ಹೇಳಿದೆನು. ಅಲ್ಲದೆ ದೇವರಿಗೆ ಕೃತಜ್ಞತಾಸ್ತುತಿ ಮಾಡಲು ಗಾಯಕರ ಎರಡು ದೊಡ್ಡ ಗುಂಪುಗಳನ್ನು ಆರಿಸಿಕೊಂಡೆನು. ಒಂದು ಗುಂಪಿನವರು ಮೆರವಣಿಗೆಯಿಂದ ಬಲಗಡೆಯಿದ್ದ ತಿಪ್ಪೆಬಾಗಿಲಿನ ಕಡೆಹೋದರು. 32 ಹೋಷಾಯ ಮತ್ತು ಯೆಹೂದ್ಯರ ನಾಯಕರಲ್ಲಿ ಅರ್ಧ ಮಂದಿ ಗಾಯಕರನ್ನು ಹಿಂಬಾಲಿಸುತ್ತಾ ಹೋದರು. 33 ಅಜರ್ಯ, ಎಜ್ರ, ಮೆಷುಲ್ಲಾಮ್, 34 ಯೆಹೂದ, ಬೆನ್ಯಾಮೀನ್, ಶೆಮಾಯ ಮತ್ತು ಯೆರಮೀಯ ಸಹ ಗಾಯಕರನ್ನು ಹಿಂಬಾಲಿಸಿದರು. 35 ತುತ್ತೂರಿಗಳನ್ನು ಹಿಡಿದುಕೊಂಡಿದ್ದ ಕೆಲವು ಯಾಜಕರೂ ಅವರನ್ನು ಹಿಂಬಾಲಿಸುತ್ತಾ ಗೋಡೆಯ ತನಕ ಬಂದರು. ಜೆಕರ್ಯನೂ ಅವರನ್ನು ಹಿಂಬಾಲಿಸಿದನು. (ಜೆಕರ್ಯನು ಯೋನಾತಾನನ ಮಗ; ಯೋನಾತನನು ಶೆಮಾಯನ ಮಗ; ಶೆಮಾಯನು ಮತ್ತನ್ಯನ ಮಗ; ಮತ್ತನ್ಯನು ಮೀಕಾಯನ ಮಗ; ಮೀಕಾಯನು ಜಕ್ಕೂರನ ಮಗ; ಜಕ್ಕೂರನು ಆಸಾಫನ ಮಗ.) 36 ಅಲ್ಲಿ ಆಸಾಫನ ಸಹೋದರರಾದ ಶೆಮಾಯ, ಅಜರೇಲ್, ಮಿಲಲೈ, ಗಿಲಲೈ, ಮಾಯೈ, ನೆತನೇಲ್, ಯೆಹೂದ ಮತ್ತು ಹನಾನೀ ಇದ್ದರು. ದೇವಮನುಷ್ಯನಾದ ದಾವೀದನು ತಯಾರಿಸಿದ್ದ ವಾದ್ಯಗಳು ಅವರ ಬಳಿಯಲ್ಲಿದ್ದವು. ಎಜ್ರನು ಗೋಡೆಯನ್ನು ಪ್ರತಿಷ್ಠೆ ಮಾಡಲು ಒಂದು ತಂಡದ ಜನರನ್ನು ತನ್ನೊಂದಿಗೆ ಕರೆದುಕೊಂಡು ಹೋದನು. 37 ಅವರು ಬುಗ್ಗೆ ಬಾಗಿಲಿನೊಳಗೆ ಪ್ರವೇಶಿಸಿ, ಮೆಟ್ಟಲುಗಳನ್ನು ಹತ್ತಿ ದಾವೀದ ನಗರದ ತನಕ ಹೋದರು. ಈಗ ಅವರು ನಗರದ ಗೋಡೆಯನ್ನು ಹತ್ತಿ ದಾವೀದನ ಮನೆಯ ಮೇಲ್ಗಡೆಯಿಂದ, “ನೀರು” ಎಂಬ ದ್ವಾರದ ಕಡೆಗೆ ಹೋದರು.
38 ಗಾಯಕರ ಇನ್ನೊಂದು ಗುಂಪು ಮೊದಲಿನವರನ್ನು ಎದುರುಗೊಳ್ಳುವಂತೆ ಎಡಗಡೆಗೆ ತಿರುಗಿದರು. ನಾನು ಅವರನ್ನು ಹಿಂಬಾಲಿಸುತ್ತಾ ಗೋಡೆಯ ಮೇಲೆ ಬಂದೆನು. ಅರ್ಧಜನರು ಅವರನ್ನು ಹಿಂಬಾಲಿಸಿ ಕುಲುಮೆಯ ಬುರುಜು ದಾಟಿ ಅಗಲದ ಗೋಡೆಗೆ ಬಂದರು. 39 ಆಮೇಲೆ ಅವರು ಎಫ್ರಾಯಿಮನ ದ್ವಾರ, ಹಳೇ ದ್ವಾರ ಮತ್ತು “ಮೀನು” ಎಂಬ ದ್ವಾರ ಇವುಗಳ ಮೇಲೆ ಹಾದುಹೋದರು. ಅವರು ಹನನೇಲ್ ಬುರುಜು ಮತ್ತು “ನೂರು” ಎಂಬ ಬುರುಜುಗಳ ಮೇಲೆ ಹಾದುಹೋಗಿ “ಕುರಿ” ಎಂಬ ದ್ವಾರದವರೆಗೂ ಹೋದರು. ಅವರು “ಕಾವಲು ದ್ವಾರ”ದ ಬಳಿ ನಿಂತರು. 40 ಅನಂತರ ಈ ಎರಡು ಗಾಯನ ವೃಂದದವರು ದೇವಾಲಯದಲ್ಲಿ ತಮಗೆ ನೇಮಕವಾದ ಸ್ಥಳದಲ್ಲಿ ನಿಂತರು. ನಾನು ನನ್ನ ಸ್ಥಳದಲ್ಲಿ ನಿಂತೆನು. ಅರ್ಧಭಾಗ ಅಧಿಕಾರಿಗಳು ದೇವಾಲಯದೊಳಗೆ ತಮ್ಮತಮ್ಮ ಸ್ಥಳಗಳಲ್ಲಿ ನಿಂತರು. 41 ಯಾಜಕರಾದ ಎಲ್ಯಾಕೀಮ್, ಮಾಸೇಯ, ಮಿನ್ಯಾಮೀನ್, ಮೀಕಾಯ, ಎಲ್ಯೋವೇನೈ, ಜೆಕರ್ಯ ಮತ್ತು ಹನನ್ಯ ತುತ್ತೂರಿಗಳನ್ನು ಹಿಡಿದುಕೊಂಡು ತಮ್ಮ ಸ್ಥಳಗಳಲ್ಲಿ ನಿಂತರು. 42 ಆಮೇಲೆ ಮಾಸೇಯ, ಶೆಮಾಯ, ಎಲ್ಯಾಜಾರ್, ಉಜ್ಜೇ, ಯೆಹೋಹಾನಾನ್, ಮಲ್ಕೀಯ, ಏಲಾಮ್ ಮತ್ತು ಏಜೆರ್ ಯಾಜಕರು ತಮ್ಮ ಸ್ಥಳಗಳಲ್ಲಿ ನಿಂತರು.
ಆಮೇಲೆ ಇಜ್ರಹ್ಯನ ನಾಯಕತ್ವದಲ್ಲಿ ಎರಡುಗುಂಪು ಗಾಯಕರು ಹಾಡಲು ಪ್ರಾರಂಭಿಸಿದರು. 43 ಆ ವಿಶೇಷ ದಿನದಲ್ಲಿ ಯಾಜಕರು ಹೆಚ್ಚಿನ ಸಂಖ್ಯೆಯಲ್ಲಿ ಯಜ್ಞವನ್ನರ್ಪಿಸಿದರು. ಜನರೆಲ್ಲಾ ಸಂತೋಷಪಟ್ಟರು. ದೇವರು ಅವರಿಗೆಲ್ಲಾ ಅತ್ಯಾನಂದವನ್ನು ಉಂಟುಮಾಡಿದನು; ಹೆಂಗಸರೂ ಮಕ್ಕಳೂ ಉತ್ಸಾಹದಿಂದ ಆನಂದಿಸಿದರು; ಜೆರುಸಲೇಮಿನಿಂದ ಹೊರಟ ಅವರ ಹರ್ಷಧ್ವನಿಯು ಬಹುದೂರದವರೆಗೆ ಕೇಳಿಸಿತು.
44 ಉಗ್ರಾಣಕ್ಕೆ ಮುಖ್ಯಸ್ತರನ್ನು ಆ ದಿನ ಆರಿಸಿದರು. ಜನರು ತಮ್ಮ ಪ್ರಥಮಫಲಗಳನ್ನು, ಪೈರಿನ ಹತ್ತನೆಯ ಒಂದಂಶವನ್ನು ತಂದರು. ಉಗ್ರಾಣದ ಮುಖ್ಯಸ್ತರು ಅವುಗಳನ್ನು ಕೋಣೆಯೊಳಗೆ ಶೇಖರಿಸಿಟ್ಟರು. ಎಲ್ಲರೂ ಅಚ್ಚುಕಟ್ಟಾಗಿ ತಮ್ಮತಮ್ಮ ಕೆಲಸಕಾರ್ಯಗಳನ್ನು ಮಾಡುವುದನ್ನು ನೋಡಿ ಜನರು ಸಂತೋಷಪಟ್ಟರು; ಹೆಚ್ಚಾದ ವಸ್ತುಗಳನ್ನು ಉಗ್ರಾಣದೊಳಕ್ಕೆ ತಂದರು. 45 ಯಾಜಕರೂ ಲೇವಿಯರೂ ತಮ್ಮ ದೇವರಿಗೋಸ್ಕರ ತಮ್ಮ ಕೆಲಸಗಳನ್ನು ಮಾಡಿದರು. ಶುದ್ಧೀಕರಣ ಆಚರಣೆಯ ಮೂಲಕ ಜನರನ್ನು ಶುದ್ಧರನ್ನಾಗಿ ಮಾಡಿದರು. ಗಾಯಕರೂ ದ್ವಾರಪಾಲಕರೂ ತಮ್ಮತಮ್ಮ ಕೆಲಸಗಳನ್ನು ಮಾಡಿದರು. ದಾವೀದನು ಮತ್ತು ಸೊಲೊಮೋನನು ಆಜ್ಞಾಪಿಸಿದ್ದ ಪ್ರಕಾರವೇ ಅವರು ಎಲ್ಲವನ್ನು ಮಾಡಿದರು. 46 (ಬಹುಕಾಲದ ಹಿಂದೆ, ದಾವೀದನು ಆಳುತ್ತಿದ್ದಾಗ ಆಸಾಫನು ಗಾಯಕರಿಗೆ ನಿರ್ದೇಶಕನಾಗಿದ್ದನು. ಅವನು ದೇವರಿಗಾಗಿ ಅನೇಕ ಕೃತಜ್ಞತಾಗೀತೆಗಳನ್ನೂ ಸ್ತುತಿಗೀತೆಗಳನ್ನೂ ರಚಿಸಿದ್ದನು.)
47 ಜೆರುಬ್ಬಾಬೆಲ್ ಮತ್ತು ನೆಹೆಮೀಯನ ಕಾಲದಲ್ಲಿ ಇಸ್ರೇಲರೆಲ್ಲರೂ ಗಾಯಕರಿಗೆ ಮತ್ತು ದ್ವಾರಪಾಲಕರಿಗೆ ಅನುದಿನ ಅಗತ್ಯವಾದವುಗಳನ್ನು ಒದಗಿಸಿಕೊಟ್ಟರು. ಇತರ ಲೇವಿಯರಿಗೋಸ್ಕರವಾಗಿಯೂ ಜನರು ಹಣವನ್ನು ಪ್ರತ್ಯೇಕವಾಗಿಟ್ಟರು. ಲೇವಿಯರೂ ಸಹ ಆರೋನನ ವಂಶದ ಯಾಜಕರಿಗಾಗಿ ಹಣವನ್ನು ಪ್ರತ್ಯೇಕವಾಗಿಟ್ಟರು.