4
ಬೋವಜ ಮತ್ತು ಮತ್ತೊಬ್ಬ ಸಂಬಂಧಿಕನು
ಬೋವಜನು ನಗರದ್ವಾರದ ಬಳಿಯಲ್ಲಿ ಕುಳಿತುಕೊಂಡನು. ತಾನು ಹೇಳಿದ್ದ ಸಮೀಪಬಂಧುವು ಅಲ್ಲಿಂದ ಹಾದು ಹೋಗುವವರೆಗೆ ಅವನು ಅಲ್ಲಿಯೇ ಕುಳಿತಿದ್ದನು. ಅವನನ್ನು ಕಂಡ ಬೋವಜನು, “ಸ್ನೇಹಿತನೇ ಇಲ್ಲಿ ಬಾ, ಇಲ್ಲಿ ಕುಳಿತುಕೋ” ಎಂದು ಕರೆದನು.
ಆಮೇಲೆ ಬೋವಜನು ನಗರದ ಹಿರಿಯರಲ್ಲಿ ಹತ್ತುಮಂದಿಯನ್ನು ಕರೆದು ಅವರಿಗೆ, “ಇಲ್ಲಿ ಕುಳಿತುಕೊಳ್ಳಿ” ಎಂದು ಹೇಳಿದನು. ಅವರೂ ಕುಳಿತುಕೊಂಡರು.
ಆಗ ಬೋವಜನು ಆ ಸಮೀಪಬಂಧುವಿನೊಡನೆ ಮಾತಾಡಿ, “ನೊವೊಮಿಯು ಮೋವಾಬ್ ಬೆಟ್ಟಪ್ರದೇಶದಿಂದ ಹಿಂದಿರುಗಿ ಬಂದಿದ್ದಾಳೆ. ಅವಳು ನಮ್ಮ ಸಂಬಂಧಿಯಾದ ಎಲೀಮೆಲೆಕನ ಹೊಲವನ್ನು ಮಾರುತ್ತಿದ್ದಾಳೆ. ನಾನು ಇದರ ಬಗ್ಗೆ ನಿನಗೆ ಈ ಜನರ ಸಮ್ಮುಖದಲ್ಲಿ ಮತ್ತು ನಮ್ಮ ಹಿರಿಯರ ಸಮ್ಮುಖದಲ್ಲಿ ಹೇಳಬೇಕೆಂದು ತೀರ್ಮಾನಿಸಿದ್ದೇನೆ. ನೀನು ಆ ಹೊಲವನ್ನು ಕೊಂಡುಕೊಳ್ಳ ಬಯಸಿದರೆ ಕೊಂಡುಕೋ. ನಿನಗೆ ಕೊಂಡುಕೊಳ್ಳಲು ಇಷ್ಟವಿಲ್ಲದಿದ್ದರೆ ನನಗೆ ಹೇಳು. ನಿನ್ನ ಬಳಿಕ ಆ ಹೊಲವನ್ನು ಕೊಂಡುಕೊಳ್ಳುವ ಹಕ್ಕು ನನಗಿದೆ. ನೀನು ಆ ಹೊಲವನ್ನು ಕೊಂಡುಕೊಳ್ಳದಿದ್ದರೆ ನಾನು ಕೊಂಡುಕೊಳ್ಳುತ್ತೇನೆ.” ಅದಕ್ಕೆ ಅವನು, “ಸರಿ, ನಾನೇ ಕೊಂಡುಕೊಳ್ಳುತ್ತೇನೆ.” ಎಂದನು.
ಅದಕ್ಕೆ ಬೋವಜನು, “ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡುಕೊಂಡರೆ ಸತ್ತವನ ಹೆಂಡತಿಯೂ ಮೋವಾಬ್ಯಳೂ ಆಗಿರುವ ರೂತಳನ್ನು ಸಹ ನೀನು ಮದುವೆಯಾಗಬೇಕು. ರೂತಳಿಗೆ ಜನಿಸುವ ಮಗನು ಆ ಹೊಲಕ್ಕೆ ಹಕ್ಕುದಾರನಾಗುವನು. ಹೀಗೆ ಈ ಭೂಮಿಯು ಸತ್ತು ಹೋದವನ ಕುಟುಂಬದಲ್ಲಿಯೇ ಇದ್ದು ಅವನ ಹೆಸರಿನಲ್ಲಿಯೇ ಮುಂದುವರಿಯುವುದು” ಎಂದು ಹೇಳಿದನು.
ಅದಕ್ಕೆ ಆ ಸಮೀಪಬಂಧುವು, “ನಾನು ಆ ಹೊಲವನ್ನು ಕೊಂಡುಕೊಳ್ಳಲಾರೆ. ಆ ಹೊಲ ನನಗೆ ಸೇರಬೇಕಾದರೂ ನಾನು ಅದನ್ನು ಕೊಂಡುಕೊಳ್ಳಲಾರೆ. ಒಂದುವೇಳೆ ನಾನು ಅದನ್ನು ಕೊಂಡುಕೊಂಡರೆ ನನ್ನ ಸ್ವಂತ ಹೊಲವನ್ನೇ ಕಳೆದುಕೊಳ್ಳಬೇಕಾಗುವುದು. ಆದ್ದರಿಂದ ನೀನೇ ಆ ಹೊಲವನ್ನು ಕೊಂಡುಕೊಳ್ಳಬಹುದು” ಎಂದು ಉತ್ತರಿಸಿದನು. (ಇಸ್ರೇಲರಲ್ಲಿ ಪೂರ್ವಕಾಲದ ಪದ್ಧತಿಯೇನೆಂದರೆ, ಯಾವುದಾದರೊಂದು ವಸ್ತುವನ್ನು ಕೊಂಡುಕೊಳ್ಳುವಾಗಲೂ ತೆಗೆದುಕೊಳ್ಳುವಾಗಲೂ ಮಾತನ್ನು ದೃಢಪಡಿಸುವುದಕ್ಕೋಸ್ಕರ ಒಬ್ಬನು ತನ್ನ ಕೆರವನ್ನು ಮತ್ತೊಬ್ಬನಿಗೆ ಕೊಡುತ್ತಿದ್ದನು.) ಆದ್ದರಿಂದ ಆ ಸಮೀಪಬಂಧುವು, “ನೀನೇ ಹೊಲವನ್ನು ಕೊಂಡುಕೋ” ಎಂದು ಹೇಳಿ ತನ್ನ ಕೆರವನ್ನು ತೆಗೆದು ಬೋವಜನಿಗೆ ಕೊಟ್ಟನು.
ಆಗ ಬೋವಜನು ಹಿರಿಯರಿಗೂ ಎಲ್ಲಾ ಜನರಿಗೂ, “ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಇವರೆಲ್ಲರ ಆಸ್ತಿಯನ್ನು ನೊವೊಮಿಯಿಂದ ಕೊಂಡುಕೊಳ್ಳುತ್ತಿದ್ದೇನೆ. ಇದಕ್ಕೆ ನೀವು ಸಾಕ್ಷಿಯಾಗಿದ್ದೀರಿ. 10 ಮೋವಾಬ್ಯಳೂ ಮಹ್ಲೋನನ ಹೆಂಡತಿಯೂ ಆಗಿದ್ದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳುತ್ತೇನೆ. ಸತ್ತುಹೋದ ಮನುಷ್ಯನ ಆಸ್ತಿಯು ಅವನ ಹೆಸರಿನಲ್ಲಿ ಉಳಿಯಲೆಂದು ನಾನು ಹೀಗೆ ಮಾಡುತ್ತಿದ್ದೇನೆ. ಹೀಗೆ ಮಾಡುವುದರಿಂದ ಸತ್ತವನ ಹೆಸರು ಅವನ ಕುಟುಂಬದಲ್ಲಿಯೂ ಅವನ ಆಸ್ತಿಯಲ್ಲಿಯೂ ಉಳಿಯುವುದು. ಇದಕ್ಕೆ ನೀವೇ ಸಾಕ್ಷಿಯಾಗಿದ್ದೀರಿ” ಎಂದು ನುಡಿದನು.
11 ನಗರದ್ವಾರದಲ್ಲಿ ಸೇರಿದ್ದ ಜನರೆಲ್ಲರು ಮತ್ತು ಹಿರಿಯರು ಸಾಕ್ಷಿಗಳಾಗಿದ್ದರು. ಅವರು, “ಈ ಸ್ತ್ರೀಯು ನಿನ್ನ ಮನೆಗೆ ಬರುವಳು. ಯೆಹೋವನು ಅವಳನ್ನು ರಾಹೇಲಳಂತೆಯೂ ಲೇಯಾಳಂತೆಯೂ ಮಾಡಲಿ. ರಾಹೇಲಳು ಮತ್ತು ಲೇಯಾಳು ಇಸ್ರೇಲಿನ ಮನೆಯನ್ನು ಕಟ್ಟಿದರು. ಎಫ್ರಾತಿನಲ್ಲಿ ಪ್ರಭಾವ ಶಾಲಿಯಾಗು! ಬೆತ್ಲೆಹೇಮಿನಲ್ಲಿ ಸುಪ್ರಸಿದ್ಧನಾಗು! 12 ತಾಮಾರಳು ಯೆಹೂದನ ಮಗನಾದ ಪೆರೆಚನಿಗೆ ಜನ್ಮಕೊಟ್ಟಳು. ಅದರಿಂದ ಅವನ ಕುಟುಂಬವು ಅಭಿವೃದ್ಧಿ ಹೊಂದಿತು. ಹಾಗೆಯೇ ರೂತಳಿಂದ ಯೆಹೋವನು ನಿನಗೆ ಹಲವಾರು ಮಕ್ಕಳನ್ನು ಕೊಡಲಿ; ಅವನಂತೆಯೇ ನಿನ್ನ ಕುಟುಂಬವೂ ಅಭಿವೃದ್ಧಿ ಹೊಂದಲಿ” ಎಂದು ಆಶೀರ್ವದಿಸಿದರು.
13 ಬೋವಜನು ರೂತಳನ್ನು ಮದುವೆಯಾದನು. ಯೆಹೋವನ ಕೃಪೆಯಿಂದ ರೂತಳು ಗರ್ಭವತಿಯಾಗಿ ಗಂಡುಮಗನಿಗೆ ಜನ್ಮಕೊಟ್ಟಳು. 14 ನಗರದ ಸ್ತ್ರೀಯರು ನೊವೊಮಿಗೆ, “ನಿನಗೆ ಈ ಬಾಧ್ಯಸ್ಥನನ್ನು ದಯಪಾಲಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಈ ಮಗು ಇಸ್ರೇಲಿನಲ್ಲಿ ಸುಪ್ರಸಿದ್ಧನಾಗಲಿ. 15 ಅವನು ನಿನ್ನನ್ನು ಉಜ್ಜೀವಿಸಮಾಡುವನು. ವೃದ್ಧಾಪ್ಯದಲ್ಲಿ ನಿನ್ನ ಸಂರಕ್ಷಕನಾಗಿರಲಿ. ನಿನ್ನನ್ನು ಪ್ರೀತಿಸುವ ನಿನ್ನ ಸೊಸೆಯು ನಿನಗಾಗಿ ಈ ಮಗುವನ್ನು ಹೆತ್ತಿದ್ದಾಳೆ. ಅವಳು ನಿನಗೆ, ಏಳುಮಂದಿ ಗಂಡುಮಕ್ಕಳಿಗಿಂತಲೂ ಶ್ರೇಷ್ಠವಾಗಿದ್ದಾಳೆ” ಎಂದು ಹೇಳಿದರು.
16 ನೊವೊಮಿಯು ಆ ಮಗುವನ್ನು ತನ್ನ ಉಡಿಲಲ್ಲಿಟ್ಟುಕೊಂಡು ಸಾಕಿಸಲುಹಿದಳು. 17 ನೆರೆಹೊರೆಯವರು ಮಗುವಿಗೆ ಹೆಸರಿಟ್ಟರು. ಆ ಸ್ತ್ರೀಯರು, “ನೊವೊಮಿಗೆ ಗಂಡುಮಗು ಹುಟ್ಟಿದೆ” ಎಂದರು. ನೆರೆಯವರು ಓಬೇದನೆಂದು ಹೆಸರಿಟ್ಟರು. ಓಬೇದನು ಇಷಯನ ತಂದೆ, ಇಷಯನು ರಾಜನಾದ ದಾವೀದನ ತಂದೆ.
ರೂತ್ ಮತ್ತು ಬೋವಜನ ವಂಶವೃಕ್ಷ
18 ಪೆರೆಚನ ವಂಶಾವಳಿ ಹೀಗಿದೆ:
 
ಪೆರೆಚನು ಹೆಚ್ರೋನನ ತಂದೆ.
19 ಹೆಚ್ರೋನನು ರಾಮನ ತಂದೆ.
ರಾಮನು ಅಮ್ಮೀನಾದ್ವಾನ ತಂದೆ.
20 ಅಮ್ಮೀನಾದ್ವಾನು ನಹಶೋನನ ತಂದೆ.
ನಹಶೋನನು ಸಲ್ಮೋನನ ತಂದೆ.
21 ಸಲ್ಮೋನನು ಬೋವಜನ ತಂದೆ.
ಬೋವಜನು ಓಬೇದನ ತಂದೆ.
22 ಓಬೇದನು ಇಷಯನ ತಂದೆ.
ಇಷಯನು ದಾವೀದನ ತಂದೆ.